ಕರ್ನಾಟಕದಲ್ಲಿ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿ (ಎಸ್) ನಡುವೆ ಗೆದ್ದವರು ಯಾರು?  ಆಡಳಿತಾರೂಢ ಬಿಜೆಪಿ ಗೆದ್ದ ಮೂರು ಸ್ಥಾನ ಅಥವಾ ಕಾಂಗ್ರೆಸ್ ಗೆದ್ದ ಒಂದು ಸ್ಥಾನದ ಕುರಿತು ಕೇಳುತ್ತಿಲ್ಲ. ಕಾಂಗ್ರೆಸ್ ಮತ್ತು ಜೆಡಿಎಸ್ ಎರಡೂ ಪಕ್ಷಗಳು ಗುರಿಯಾಗಿಟ್ಟುಕೊಂಡಿದ್ದ ನಾಲ್ಕನೇ ಸ್ಥಾನವನ್ನು ಬಿಜೆಪಿ ಗೆದ್ದುಕೊಂಡಿದೆ. ಹಾಗಾದರೆ ಯಾರ ತಂತ್ರ ಸರಿ? ಯಾರ ತಂತ್ರ ತಪ್ಪು? ವಿರೋಧ ಪಕ್ಷಗಳು ತೆಗೆದುಕೊಂಡ ನಿರ್ಧಾರಗಳು ಬಿಜೆಪಿಯ ಲೆಹರ್ ಸಿಂಗ್ ಸಿರೋಯಾ ಅವರನ್ನು ರಾಜ್ಯಸಭಾ ಸದಸ್ಯರನ್ನಾಗಿ ಮಾಡಿದೆ.
ಕಾಂಗ್ರೆಸ್ ತನ್ನ ಎರಡನೇ ಅಭ್ಯರ್ಥಿ, ಮಾಜಿ ಕೇಂದ್ರ ಸಚಿವ ಕೆ ರೆಹಮಾನ್ ಖಾನ್ ಅವರ ಪುತ್ರ ಮನ್ಸೂರ್ ಅಲಿ ಖಾನ್ ಅವರನ್ನು ಗೆಲ್ಲಿಸುವಲ್ಲಿ ವಿಫಲವಾಗಿದೆ. ಅದೇ ರೀತಿ, ಜೆಡಿ (ಎಸ್) ತನ್ನ ಏಕೈಕ ಅಭ್ಯರ್ಥಿ –  ಕುಪೇಂದ್ರ ರೆಡ್ಡಿಯವರನ್ನು ಗೆಲ್ಲಿಸಲು ವಿಫಲವಾಗಿದೆ. ಎರಡೂ ಪಕ್ಷಗಳ ನಡುವೆ ಯಾವುದೇ ಮುಕ್ತ ಅಥವಾ ಗುಪ್ತ ಹೊಂದಾಣಿಕೆ ಇರಲಿಲ್ಲ. ಇಬ್ಬರಿಗೂ ಸಮಾನ ಶತ್ರು ಬಿಜೆಪಿ, ಹಾಗಾಗೀ ಇಬ್ಬರೂ ಪರಸ್ಪರ ಬೆಂಬಲ ನಿರೀಕ್ಷಿಸಿದ್ದರು.
ಸಿದ್ದರಾಮಯ್ಯನವರು ಹಲವು ಮುಸ್ಲಿಂ ನಾಯಕರ ರಾಜಕೀಯ ಜೀವನವನ್ನೇ ಮುಗಿಸುತ್ತಿದ್ದಾರೆ ಎಂದು ಜೆಡಿಎಸ್ ಬಹಳ ದಿನಗಳಿಂದ ಟೀಕಿಸುತ್ತಿದೆ. ಸಿದ್ದರಾಮಯ್ಯ ಅವರು ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಿ,  ಬೆಂಬಲ ನೀಡುವಂತೆ ಜೆಡಿಎಸ್ ನ್ನು ಕೋರಿದ್ದರು ಅವರ ಮಾತಿನ ದಾಟಿ  ಸವಾಲಿನ ರೀತಿಯಲ್ಲಿತ್ತು,  ಆದರೆ, ಈ ಬಗ್ಗೆ ತನ್ನೊಂದಿಗೆ ಯಾವುದೇ ಪೂರ್ವಭಾವಿ ಸಮಾಲೋಚನೆ ನಡೆಸದೆ ಕಾಂಗ್ರೆಸ್ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ ಎಂದು ಜೆಡಿಎಸ್ ಆರೋಪಿಸಿದೆ.

 ಮುಂಬರುವ ಚುನಾವಣೆಯಲ್ಲಿ ಜೆಡಿ (ಎಸ್) ನಿಂದ ಕಾಂಗ್ರೆಸ್ ಅಂತರ ಕಾಯ್ದುಕೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ಸಿದ್ದರಾಮಯ್ಯ ಈ ಆಟ ಆಡಿದ್ದು, ಅವರು ತಮ್ಮ ತಂತ್ರದಲ್ಲಿ ಯಶಸ್ವಿಯಾಗಿದ್ದಾರೆ ಎಂದೇ ಬಹುತೇಕರು ಅಭಿಪ್ರಾಯಪಡುತ್ತಿದ್ದಾರೆ. ಆದರೆ ಡಿ ಕೆ ಶಿವಕುಮಾರ್ ಮತ್ತು ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಅವರ ಪಕ್ಷದ ನಾಯಕರಿಗೆ ಈ ರೀತಿಯ ತಂತ್ರಗಾರಿಕೆ ಬೇಕಾಗಿತ್ತೇ? ಈ ನಾಯಕರಿಗೆ  2023 ರ ವಿಧಾನಸಭೆ ಚುನಾವಣೆಯಲ್ಲಿ ಜೆಡಿ (ಎಸ್) ಜೊತೆಗಿನ ಮೈತ್ರಿಗೆ ಪಕ್ಷದ ಬಾಗಿಲು ಮುಚ್ಚಲು  ಬಯಸಿದ್ದರಾ? ಅವರು ಬಹುಶಃ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರ ಜೊತೆಗಿನ ಸಂಬಂಧವನ್ನು ಉಳಿಸಿಕೊಳ್ಳಲು ಬಯಸಿದ್ದರೇನೊ.
ಜೆಡಿಎಸ್ ಫಲಿತಾಂಶಕ್ಕಿಂತ ಹೆಚ್ಚಾಗಿ ಇಬ್ಬರು ಬಹಿರಂಗ ಬಂಡಾಯ ಶಾಸಕರಿಂದಲೇ ಎಚ್.ಡಿ ಕುಮಾರಸ್ವಾಮಿ ಅವರಿಗೆ ಮುಖಭಂಗವಾಗಿದೆ. ಕೋಲಾರ ಶಾಸಕ ಕೆ.ಶ್ರೀನಿವಾಸಗೌಡ ಅವರು ಕಾಂಗ್ರೆಸ್ ನ್ನು ನಾನು ಇಷ್ಟಪಟ್ಟಿದ್ದೇನೆ, ಹಾಗಾಗಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿದ್ದೇನೆ ಎಂದು ಬಹಿರಂಗವಾಗಿ ಹೇಳಿದ್ದಾರೆ. ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ ಅವರು ಕಾಂಗ್ರೆಸ್ ಅಥವಾ ಬಿಜೆಪಿಗೆ ಮತ ನೀಡಿ  ಜೆಡಿಎಸ್ ಪಕ್ಷದ ವಿಪ್ ಉಲ್ಲಂಘಿಸಿದ್ದಾರಾ ಎಂಬ ಅನುಮಾನ ಮೂಡಿದೆ.  ಜೆಡಿಎಸ್ ಮತಗಟ್ಟೆ ಏಜೆಂಟ್ ಹೆಚ್ ಡಿ ರೇವಣ್ಣ ಈ ಬಗ್ಗೆ ಸ್ಪಷ್ಟನೆ ನೀಡಬೇಕಿತ್ತು. ಏಕೆಂದರೆ ಇದು ಬಹಿರಂಗ ಮತದಾನವಾಗಿದ್ದು, ಮತದಾರರು (ಶಾಸಕರು) ತಮ್ಮ ಮತಪತ್ರವನ್ನು ಪೆಟ್ಟಿಗೆಯಲ್ಲಿ ಹಾಕುವ ಮೊದಲು ಏಜಂಟರಿಗೆ ತೋರಿಸಬೇಕಾಗಿತ್ತು. ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಅವರು, ರೇವಣ್ಣ ತಮ್ಮ ಮತಪತ್ರ ನೋಡಿದ್ದಾರೆ ಎಂದು ಹೇಳಿದ್ದಾರೆ. ರೇವಣ್ಣ ಅವರಿಗೆ ಬ್ಯಾಲೆಟ್ ಪೇಪರ್ ಪ್ರದರ್ಶಿಸುವ ಎಸ್ ಆರ್ ಶ್ರೀನಿವಾಸ್ ಮತಪತ್ರದಲ್ಲಿನ ಆಯ್ಕೆಯನ್ನು  ಬೆರಳಿನಿಂದ ಮುಚ್ಚಿ ಹಿಡಿದಿದ್ದರು ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ರೇವಣ್ಣ ಮತಪತ್ರವನ್ನು ಸ್ಪಷ್ಟವಾಗಿ ನೋಡಿದ್ದರೆ ಈ ವೇಳೆಗಾಗಲೇ ಆರೋಪಕ್ಕೆ ಪ್ರತಿಕ್ರಿಯಿಸಬೇಕಿತ್ತು. ಇದುವರೆಗೂ ವಿಪ್ ಉಲ್ಲಂಘಿಸಿದ ಶಾಸಕರಿಗೆ ಶೋಕಾಸ್ ನೋಟಿಸ್ ನೀಡಲಾಗಿಲ್ಲ. ನಿರೀಕ್ಷೆಗಿಂತ ಎರಡು ಮತಗಳು ಹೆಚ್ಚು ಬಂದಿವೆ ಎಂದು ಬಿಜೆಪಿ ಹೇಳಿಕೊಂಡಿದೆ. ಇದು ನಿಜವಾದರೆ ಬಿಜೆಪಿಗೆ ಸಹಾಯ ಮಾಡಿದವರು ಯಾರು?
ಈ ಚುನಾವಣೆಯಲ್ಲಿ ಬಿಜೆಪಿಯು ಹೆಚ್ಚು ಪ್ರಯತ್ನವಿಲ್ಲದೆ ಲಾಭ ಪಡೆಯಿತು, ಪರಸ್ಪರ ಬಡಿದಾಡಿಕೊಳ್ಳುತ್ತಿರುವ ವಿರೋಧ ಪಕ್ಷಗಳಿಗೆ ಬಿಜೆಪಿ ಧನ್ಯವಾದ ಹೇಳಲೇ ಬೇಕು. ಈ ಚುನಾವಣೆಯಲ್ಲಿನ ಗೊಂದಲ, ಅವ್ಯವಸ್ಥೆ ಅಥವಾ ಬೆಳವಣಿಗೆಗಳು ಮುಂದಿನ ವಿಧಾನಸಭೆ ಚುನಾವಣೆಯ ಮೇಲೆ ಪರಿಣಾಮ ಬೀರದಿರಬಹುದು. ಏಕೆಂದರೆ ರಾಜಕೀಯ ಪಕ್ಷಗಳು ಮತ್ತು ರಾಜಕಾರಣಿಗಳ ನಡುವಿನ ವೈಮನಸ್ಸು, ಆರೋಪ, ಪ್ರತ್ಯಾರೋಪ ಯಾವುದೂ ಶಾಶ್ವತವಲ್ಲ. ಏಪ್ರಿಲ್ನಲ್ಲಿ ನಡೆಯಲಿರುವ ಮುಂದಿನ ಚುನಾವಣೆಯ ಮೊದಲು ಅನೇಕ ರಾಜಕಾರಣಿಗಳು ಪಕ್ಷಾಂತರ ಮಾಡಲಿದ್ದಾರೆ. ಜೆಡಿಎಸ್ ಗೆ ಬಿಜೆಪಿಯು ‘ಅಸ್ಪೃಶ್ಯ’ವಾಗಿ ಉಳಿಯದಿರಬಹುದು. ಹಾಗೇಯೇ ಕಾಂಗ್ರೆಸ್ ಗೆ ಜೆಡಿಎಸ್ ಕೈಜೋಡಿಸಬಹುದು.